ನಮ್ಮ ಹುಡುಗನಿಗೆ ಒಂದು ಹುಡುಗಿ ಬೇಕಾಗಿದೆ

ಅವನು ನಮ್ಮೂರ ಹುಡುಗ
ಪ್ರೀತಿಯಲಿ ಒಂಟಿಸಲಗ
ತನ್ನವರ ಕಾಯೋ ಗಿಡುಗ
ಗುಣದಲ್ಲಿ ಅಪರಂಜಿಯೋ

ಮಾತಿನಲ್ಲೇ ಗೆಲ್ಲೋ ಜಾಣ
ಶೌರ್ಯದಲ್ಲಿ ವೀರ ರಾಣ
ಪ್ರೀತಿಗೆ ಸೋಲುವ ಗುಣದ
ವಾತ್ಸಲ್ಯದ ಕಾರನ್ಜಿಯೋ

ರೂಪದಲ್ಲಿ ಮನ್ಮಥನಿವನು
ನೀತಿಯಲಿ ಪಂಡಿತನಿವನು
ರೀತಿಯಲಿ ಎಲ್ಲರಿಗು ಮಾದರಿ
ನಡೆ ಬಂಗಾರದವನು

ನಮ್ಮೂರ ಅಪರಂಜಿಗೆ
ಮಲೆನಾಡ ಗುಣಸಂಪನ್ನಗೆ
ಮುತ್ತಿನಂಥ ಜೋಡಿಯಾಗೋ
ಹುಡುಗಿ ಬೇಕಾಗಿದೆ

ನಮ್ ಕಾಲದಾಗೆ ಹಿನ್ಗಿರಲಿಲ್ಲ ಮಗ

ನಮ್ ಕಾಲದಾಗೆ ಹಿನ್ಗಿರಲಿಲ್ಲ ಮಗ
ಬಾಸು-ಗೀಸು ಅನ್ನೋದನ್ನ ಕೇಳಿರಲಿಲ್ಲ ಜಗ

ಬೆಳಬೆಳಗ್ಗೆನೆ ಎದ್ದು ಗೇಮೆಗೆ ಹೊಲಕ್ಕೊಯ್ತಿದ್ವು
ತನ್ಗ್ಳಿಟ್ಟು-ಸೊಪ್ಪು ಸಿಕ್ರೆ ಅದೇ ಸ್ವರ್ಗ ಅಂತ ತಿನ್ತಿದ್ವು
ನೆಲ-ಜಲ ಅಂದ್ರೆ ಭೂಮ್ತಾಯಿ ಅಂತಿದ್ವು
ಊರವ್ರೆಲ್ಲ ನಮ್ಮವ್ರೆ ಅಂತ ಕರಿತಿದ್ವು

ಗಡಿಯಾರದಂಗೆ ಕಾಲನು ಬದಲಾಯಿತು ಮಗ
ನಮ್ಮಾದಾದ್ರೂ ಭೂಮಿ ಕೇಳೊನ್ಗಿಲ್ಲ ಈಗ

ಬೆಳಬೆಳಗ್ಗೆನೆ ಎದ್ದು ಗೇಮೆಗೆ ಆಫಿಸ್ಗೋಯ್ತಾರೆ
ಇಡ್ಲಿ-ದೋಸೆ ಬಿಟ್ಟು ಪಿಜ್ಜ-ಗಿಜ್ಜ ಅಂತ ಅದೇನೋ ತಿಂತಾರೆ
ಕಂಡವ್ರ ನೆಲ ಸಿಕ್ರೆ ಸಾಕು ಬಾಚಿಕೊಳ್ತಾರೆ
ಪಕ್ಕದ್‍ಮನೆಯವನು ಸತ್ರು ಯಾರೋ ಹೋಗೋ ಅಂತಾರೆ

ನಮ್ ಕಾಲದಾಗೆ ಹಿನ್ಗಿರಲಿಲ್ಲ ಮಗ
ಕೇಸು-ಫೀಸು ಅಂತೂ ಅಲಿತಿರಲಿಲ್ಲ ಆಗ

ಅದೇನೋ ಸಾಫ್ಟ್‌ವೇರು-ಹಾರ್ಡ್‌ವೇರು
ಅಂತ ಬಾಯೀ ಬಡ್ಕೊಂತಾರಲ್ಲೋ
ಐಟಿ-ಬಿಟಿ ಅಂತ ಬಂದು
ಹೊಲದಾಗೇ ಕೆಲ್ಸ ಬಿಟ್ಟೆ ಬಿಟ್ರಲ್ಲೋ

ಜಾತಿ-ಧರ್ಮ ಅಂತ ಹೊಡೆದಾಡ್ತ ಕುಂತವ್ರೋ
ಏನಕ್ಕೂ ಇರಲಿ ಅಂತ ಬಾಂಬು ತನ್ದವ್ರೊ
ಬೇಲಿನೆ ಎದ್ದು ಹೊಲ ಮೇಯೊ ಕಾಲ ಬಂದಿದೆ
ದೇಶ-ಭಾಷೆಗೆ ಅಪಾಯದ ಸುದ್ಧಿ ತಂದಿದೆ

ನನ್ನ ಕನಸ ಮೇಲೆ ಅವಳ ಕಣ್ಣು

ನನ್ನ ಕನಸ ಮೇಲೆ ಅವಳ ಕಣ್ಣು
ಎಲ್ಲಿ ಹೋದರೂ ಬಿಡಲೊಲ್ಲಳು
ಕಣ್ಮುಚ್ಚಿದರೆ ಸಾಕು ರೆಪ್ಪೆಯ
ದಾಟಿ ಬರುವಳು

ಕನಸಲಿ ಹೊಸ ಕಾರು
ಕೊಳ್ಳುವ ಹಾಗಿಲ್ಲ
ಜೋಕಾಲಿಯಲಿ ಕೂತು
ಹಾರುವ ಹಾಗಿಲ್ಲ
ಅಲ್ಲಿಯೂ ಬಂದು 'ಸರಿ-
ನನಗೂ ಜಾಗ ಬಿಡು'
ಎಂದು ಗದರಿಸುವಳು
ನನ್ನ ಸರಿಸಿ ಕೂತುಬಿಡುವಳು

ಕನಸಲಿ ಎಲ್ಲವೂ ಸಾಧ್ಯವೆಂದು
ಮಂಜಿನ ಮನೆಯ ಕಟ್ಟಿ
ಕಾಮನಬಿಲ್ಲನ್ನು ತೋರಣ ಮಾಡಿ
ಶಿವನ ಪೂಜೆಗೆ ಕರೆದಿದ್ದೆ
ನಳನನ್ನು ಅಡಿಗೆಗೆ ಬರಹೇಳಿದ್ದೆ
ಅಲ್ಲಿಯೂ ಬಂದಳು
ಅಡಿಗೆಗೆ ಹುಳಿ ಹಿಂಡಿ
ಶಿವನ ಪೂಜೆಗೆ ಅವಳೊಬ್ಬಳೆ ಕುಳಿತಳು

ಎಲ್ಲಿ ಸಿಕ್ಕರೂ ಬಿಡೆನು ಇನ್ಮುಂದೆ
ಕಲ್ಲು ಸಕ್ಕರೆ ಕನಸ ಪಾಯಸಕ್ಕೆ
ನೊಣವಾಗಿ ಬಿದ್ದವಾಳ ಹಿಡಿದು
ರೆಪ್ಪೆಯಿಂದ ಹೊರಗೆಸೆದುಬಿಡುವೆ
ಕನಸ ಹೊರಗು ಕಾಡುವ
ಬಜಾರೀ ಹೆಣ್ಣಿನ ಸೊಕ್ಕನು
ಮತ್ತೆ ಕನಸಲಿ ಮಣಿಸಿ ಬಿಡುವೆ

ನಾವು ನಮ್ಮವನ್ನ ಮರೆತಿದ್ದೇವೆ

ನಾವು ನಮ್ಮವನ್ನ ಮರೆತಿದ್ದೇವೆ. ಅದಕ್ಕೆ ಬೇರೆಯವರು ಬಂದು ನೆನಪು ಮಾಡಿಕೊಡ್ತಿದ್ದಾರೆ. ಹೌದು ತಾನೇ? ನಮ್ಮ ದೇಶಕ್ಕೆ ಬೇರೆಯವರಿಂದ (ಭಯೋತ್ಪಾದಕರು, ಬೇರೆ ರಾಷ್ಟ್ರಗಳಿಂದ) ಎಷ್ಟು ಅಪಾಯವಿದೆ ಎಮ್ಬುದನ್ನ ಇತ್ತೀಚಿಗೆ ಬಾಂಬ್ ದಾಳಿ ನಡೆದ ಮೇಲೆ ನಾವೆಲ್ಲ ನೆನಪು ಮಾಡಿಕೊಳ್ಳುತ್ತಿದ್ದೇವೆ. ಆದರೆ ಇಂತಹ ಘಟನೆಗಳು ಹತ್ತಾರು ಸಲ ಭಾರತದಲ್ಲಿ ವಿವಿಧ ಭಾಗಗಳಲ್ಲಿ ನಡೆದಿದೆ. ಅಂದು ನಡೆದಾಗ ಎಲ್ಲರೂ ಎಚ್ಚೆತ್ಟುಕೊಳ್ಳುತ್ತಾರೆ. ನಾವು-ನೀವು ಯಾರು ಬೇಕಾದರೂ ಆಗಿರಬಹುದು. ಮತ್ತೆ ಅದು ನೆನೆಪುಗಳ ಪುಟ ಸೇರಿಬಿಡುತ್ತದೆ. ನಮಗೆಲ್ಲ ನಿದ್ರೆ ಬಂದುಬಿಡುತ್ತದೆ.
ಈ ಎಲ್ಲ ಪರಿಸ್ಥಿತಿಗಳು ರಾಜಕಾರಣಿಗಳ ಚುನಾವಣೆಗೆ ಸರಿಯಾದ ಆಹಾರವಾಗಿಬಿಡುತ್ತೆ, ಮಾಧ್ಯಮಗಳ ಪ್ರಚಾರಕ್ಕೆ, ಬರಹಗಾರರ ಬರವಣಿಗೆಗೆ ಸೀಮಿತವಾಗಿಬಿಡುತ್ತದೆ ಅಥವಾ ಹೆಚ್ಚೆಂದರೆ ಜನರೆಲ್ಲ ಮೆಚ್ಚಿಕೊಳ್ಳೋ ಒಂದು ಸಿನಿಮಾ ಆಗಿಬಿಡುತ್ತೆ. ಇದರ ಹೊರತಾಗಿ ಮತ್ತೊಂದು ಇಂತಹ ಘಟನೆ ನಡೆಯದಂತೆ ತಡೆಯುವ ಯಾವು ಪ್ರಯತ್ನವೂ ನಡೆದಂತೆ ನಮಗೆ ಕಾಣಿಸುತ್ತಿಲ್ಲ.

ಈಗಲಾದರೂ ನಾವು ಸ್ವಲ್ಪ ಜಾಗೃತರಾದಂತೆ ಅನ್ನಿಸುತಿದೆ. ಆ ಜಾಗೃತಿ ಸದಾ ಇರಬೇಕು. ಚುನಾವಣೆಯ ಸಮಯದಲ್ಲಿ ಅರ್ಹತೆಯನ್ನು ನಿರ್ಧರಿಸದೇ ಯಾವುದೋ ಒಂದು ತರ್ಕಕ್ಕೆ ಬಿದ್ದೋ, ಹಣದ ಆಮಿಶಕ್ಕೋ ಬಲಿಯಾಗಿ ನಮ್ಮ ಅಮೂಲ್ಯವಾದ ಮತವನ್ನ ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ, ಕೆಲಸ ಮಾಡದೇ ಬರೀ ಕಟೌಟ್ ಮಾಡಿಸಿಕೊಂಡವರಿಗೆ ಹಾಕುತ್ತೇವೆ. ಯುವಜನತೆ ದೇಶದ ಆಡಳಿತವನ್ನು ಕೈಗೆ ತೆಗೆದುಕೊಳ್ಳಬೇಕಾಗಿದೆ. ಇದು ಸಾಧ್ಯವಾಗುವುದಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗಾದರೂ ಸುಧಾರಿಸುವುದು. ಇಲ್ಲದಿದ್ದರೆ ಅದೇ ರಾಗ ಅದೇ ಹಾಡು.

ಚುನಾವಣೆಗಳನ್ನು ಯಾವುದೋ ಕಾರಣಕ್ಕೂ ತಿರಸ್ಕರಿಸುವುದು ನಮ್ಮಿನ್ದಾಗುವ ಅಪರಾಧವೆ. ಸರಿಯಾದ ನೇತಾರರನ್ನು ಆರಿಸುವುದು, ನಮ್ಮ ವ್ಯಾಪ್ತಿಯಲ್ಲಿ ಎಲ್ಲ ಸರ್ಕಾರಿ ಯೋಜನೆಗಳು ಯೋಜನಾಬದ್ದವಾಗಿ ಜಾರಿಗೊಳ್ಳುವಂತೆ ನೋಡಿಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ. ಈ ಸಂಧರ್ಭದಲ್ಲಿ ನೊಂದ ಜೀವಗಳಿಗೆ ಸ್ವಲ್ಪವಾದರೂ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವೆ.

ಪಯಣ

ಎಲ್ಲಿಗೆ ಸಾಗಿದೆ ಪಯಣ
ಕಡಲಾಳಕೊ
ಹಿಮಾಲಯದ ತುದಿಗೋ
ಕಗ್ಗತ್ತಲಲಿ ಕಳೆಯುವ
ಭಯ ಕಾಡಿದೆ

ನಾವುಗಳೆಲ್ಲ ಕಳೆದೆವು ಇಲ್ಲಿ
ನಾನು ಮಾತ್ರ ಉಳಿದೆನು
ನಮ್ಮವರೆಲ್ಲ ಆಳಿದರು
ನನ್ನವರು ಮಾತ್ರ ಉಳಿದರು

ತಿಳಿದ ಜೀವಿಗಳ
ನೋವು ಉಳಿದಿದೆ
ಮಹಾ ಪರ್ವತಗಳಾಗಿ
ಎಂದು ಸಿಡಿಯುವುದೋ
ಅಂದೇ ಜಗತ್ಪ್ರಳಯ

ಪ್ರಿಯ ಹೃದಯವೇ ನೀನು ಓದದ ಕೊನೆಯ ಪತ್ರ

ಹಾಯ್ ಲಿಲ್ಲಿ,

ನಾನು ಬರೆಯೋದನ್ನ ನಿಲ್ಲಿಸೋ ಕಾಲ ಬಂದಿದೆ ಅನ್ನಿಸುತ್ತೆ. ಅಷ್ಟಕ್ಕೂ ನಾನು ಏನು ಬರೆದಿಲ್ಲ. ನಿನಗೆ ಒಂದು ಪತ್ರವನ್ನು ಬಿಟ್ಟು. ಅದನ್ನು ನಾನು ಕೊಡದೇ ಇಟ್ಟುಕೊಂಡುಬಿಟ್ಟೆ (ನಿನಗೆ ಕೊಡಲು ಹೆದರಿಕೆಯಾಗಿ). ಹೋಗಲಿ ಬಿಡು. ನಾನು ಈಗ ಬರೆಯೋ ಕಾಗದ ಕೂಡ ನಿನಗೆ ತಲುಪದೇ ಇರಬಹುದು, ನಾನುನಿನ್ನ ತಲುಪದೇ ಇರೋ ಹಾಗೆ. ಮನಸ್ಸಿನಲ್ಲಿರೋ ಪ್ರೀತಿ ನಿನಗೆ ಅರ್ಥ ಆಗುತ್ತಾ ಅನ್ನೋದೇನನಗಿರುವ ಸಂಶಯ. ಇಷ್ಟು ಕಾಲ ನಿನ್ನ ಹೆಸರಿನಲ್ಲೇ ಕೆಲವು ಸಾಲುಗಳನ್ನ ಬರೆಯುತ್ತಿದ್ದೆ. ಅದಕ್ಕೆಕೆಲವೊಂದು ಸಲ ಪದ್ಯ ಎನ್ನುತ್ತಿದ್ದೆ, ಕೆಲವೊಂದು ಸಲ ಗದ್ಯ ಎನ್ನುತ್ತಿದ್ದೆ. ಮುಂದೆ ಏನೆಂದು ಹೇಳುವುದು?ನೀನು ನನ್ನ ಬಿಟ್ಟು ಹೊರಟು ನಿಂತಿದ್ದೀಯ. ನನ್ನಲ್ಲಿರುವ ಕೆಲವು ಸಾಲುಗಳು ಹೊರಬರುತ್ತಿವೆ. ಇವೆ ಕೊನೆಯಸಾಲುಗಳೇನೋ? ಬಹುಶಃ ನಿನಗೆ ಅನ್ನಿಸಿರಬಹುದು ನನ್ನಲ್ಲಿ ಪ್ರೀತಿಯೆಂಬುದು ಬಾರಿ ಆಕರ್ಷಣೆಯಾಗಿತ್ತು ಮತ್ತು ಅದೀಗ ಸತ್ತು ಹೋಗಿದೆಯೆಂದು. ನಿಜ ಹೇಳ್ತೀನೇ, ಲಿಲ್ಲಿ. ಅದು ಸಾಯುವ ಕೂಸಲ್ಲ. ಅದು ಬಂಡೆಗಲ್ಲು. ಒಡೆದರೆ ಚೂರಾಗಿ ಮಣ್ಣಾಗುವುದು. ನೆಲದ ಮೇಲೋ, ನೀರಿನ ಕೆಳಗೋ ಇದ್ಡುಬಿಡುತ್ತೆ. ಅದರಪಾಡಿಗೆ ಅದು.
ನಾನು ನಿನಗೆ ಇಷ್ಟ ಆಗಿಲ್ಲ ಅನ್ನೋದು ನನಗೆ ಗೊತ್ತು. ಯಾಕೆಂದರೆ ನಿನ್ನಲ್ಲಿರುವ ಹಣ, ಗುಣ, ರೂಪಯಾವುದು ನನ್ನಲ್ಲಿಲ್ಲ. ನಿನಗೆ ಇಷ್ಟವಾಗೋ ಹುಡುಗ ಹೇಗಿರಬೇಕು ಅನ್ನೋದು ನನಗೆ ಗೊತ್ತಿಲ್ಲ. ನಿನ್ನ ತಂದೆ ತಾಯಿ ತೋರಿಸಿದ ಹುಡುಗನನ್ನೇ ನಿನ್ನ ತಮ್ಮನಿಗೆ ಭಾವನನ್ನಾಗಿ ಮಾಡುತ್ತೀಯೆಂದು ನನಗೆ ಗೊತ್ತು. ಅದೆಲ್ಲಹಾಳಗಿ ಹೋಗಲಿ ಬಿಡು. ಒಟ್ಟಾರೆ ನೀನು ನನ್ನನ್ನ ಮರೆತು, ಮತ್ತೆಂದೂ ಕಾಣಿಸಿಕೊಳ್ಳದಂತೆ ಸಂತೋಷವಾಗಿ ಹೋಗುತ್ತಿದ್ದೀಯ. ನಾನು ನಿಸ್ವಾರ್ಥ ಪ್ರೇಮಿಯಾಗಬೇಕೆಂದಿದ್ದೆ. ಆದರೆ ನಿನ್ನ ಪ್ರೀತಿ ಹಮ್ಬಲಿಸಿ ಸ್ವಾರ್ಥಿಯಾದೆ.


ನಿನ್ನ ಆಸೆ-ಕನಸುಗಳು ಚಿರಾಯುವಾಗಲಿ. ನನ್ನ ಪ್ರೀತಿ ಸಾಯದಿರಲಿ.
ಕೊನೆಗೊಳ್ಳದ ಪ್ರೀತಿಯಿಂದ

ರಾಜ್

ನಿನ್ನ ಮನವೇಕೋ ಕರಗದು

ಕಲ್ಲು ಕಾಲಾನ್ತರದಲ್ಲಿ
ನೀರೊಡನೆ ಮ್ರುದುವಾಗುವುದು
ಮುಳ್ಳಿನ ಗಿಡದಿ
ಚೆಲುವಿನ ಹೂವು ಅರಳುವುದು
ಕಾಠಿಣ್ಯದಿನ್ದ ಮ್ರುದುತ್ವಕ್ಕೆ
ಉದಾಹರಣೆಗಳು ಹಲವು
ನಿನ್ನ ಮನವೇಕೋ
ಕರಗದು ನನ್ನ ಪ್ರೀತಿಗೆ
ಉರುಳಿದರು ಶತಶತಮಾನಗಳು
ನನಗೆ ಒಂದೊಂದು
ಕ್ಷಣವೂ ಒಂದೊಂದು
ಶತಮಾನ