ಕಣ್ಣಾ ಮುಚ್ಚಾಲೆ

ಕಾಡುತ್ತೀಯಲ್ಲೆ
ನಲ್ಲೆ
ನನ್ನ ಕುಂತಲ್ಲೇ
ಆಡಿಸುತ್ತೀಯಲ್ಲೆ

ಕಾಡುತ್ತೀಯಲ್ಲೆ
ಕನಸಲ್ಲೂ ಕಾಡುತ್ತೀಯಲ್ಲೆ
ಓಡಾಡ್ತಿಯಲ್ಲೇ
ಮನಸೊಳಗೆಲ್ಲ ನಿಲ್ಲದೆ
ಕುಣಿದಾಡ್ತೀಯಲ್ಲೆ

ಕ್ಷಣ ಬಿಟ್ಟರೂ ನೀ ಲೋಕ ಸಂಚಾರಿ
ನೀ ಒಪ್ಪಿದರೆ ನಾ ಸಂಸಾರಿ
ಚಂಚಲೆ
ನಿಲ್ಲು ಅಲ್ಲೇ
ನಿಂತರು ನೀ ನನ್ನ ಕಾಡುತ್ತೀಯಲ್ಲೆ

ನೀನು ಪದವಾಗಿ
ಹಾಡಿಗೆ ಶೃತಿಯಾಗಿ
ಹಿಡಿಬೇಕು ಅಂದ್ಕೊಂಡ್ರು
ಸಿಗದೇ ನೀ ಓಡ್ತಿಯಲ್ಲೆ
ಪದಗಳಿಗೂ ಸಿಗದೇ ಕಾಡಿಸಿ ಓಡ್ತಿಯಲ್ಲೆ

ಪ್ರೀತಿಯ ಎಳೆ ಎಳೆದು
ಪ್ರೇಮದ ಬಲೆ ಹೆಣೆದು
ಹೇಗೋ ಇದ್ದವನ ಹಿಡಿದೆಳೆದು
ಕೆಡವಿ ಬೀಳಿಸಿದೆಯಲ್ಲೇ
ನನ್ನ ಸೆರೆ ಹಿಡಿದೆಯಲ್ಲೆ

ನಿಲ್ಲೇ ನನ್ನ ನಲ್ಲೆ
ನನ್ನ ಪ್ರೀತಿಯ ಬೇಡವೆಂದೆಯಲ್ಲೆ
ಆದರೂ ನಿನ್ನ ನೆನೆಯುತ
ನಾ ಕುಂತೆನಲ್ಲೆ
ನಿನ್ನೊರತು ನನಗ್ಯಾರು
ಬೇಡವಲ್ಲೆ ನಲ್ಲೆ

ನಡುಗುತಿದೆ ಇವನ ನಡೆಗೆ

ಹೆದರಿಕೆ ಶುರುವಾಗಿದೆ
ಯಾಕೋ ಅಮಾವಾಸ್ಯೆಗೆ
ತನ್ನೊಡಲ ಕಗ್ಗತ್ತಲಿನಲೂ
ಸಾಗುವ ಖದೀಮರ ನಿರ್ಭೀತ ನಡೆಗೆ

ಹಣವು ಅಳುತಲಿದೆ
ಹೆಣವು ಅಂಜಿದೆ
ಹಣಕಾಗಿ ಹೆಣವನ್ನು ಕದ್ದೊಯ್ಯುವ
ಲೋಭಿಗಳ ಹಾಳು ನಡೆಗೆ

ಭೂಮಿಯು ನಡುಗುತಿದೆ
ಕಾಡೆಲ್ಲೋ ಮರೆಯಾಗುತಿದೆ
ಕಾಸಿಗಾಗಿ ಮಣ್ಣನು ಬಿಡದ
ಮಾನವನ ಅತಿಆಸೆಯ ನಡೆಗೆ

ನೀರೆಲ್ಲ ನಾಪತ್ತೆ
ಉಸಿರೆಲ್ಲ ವಿಷವಂತೆ
ನೀರಲ್ಲೂ, ಉಸಿರಲ್ಲೂ ವಿಷವ ಹರಡೋ
ದಾನವ ರೂಪಿಯ ನಡೆಗೆ

ನಡುಗುತಿದೆ ಇವನ ನಡೆಗೆ
ಭುವಿ-ಬಾನೆಲ್ಲ
ಮೂಕವಾಗಿಯ ನೋಡುತಿದೆ
ಕಾಯುತ ಕಾಲ