Showing posts with label ಕವನಗಳು. Show all posts
Showing posts with label ಕವನಗಳು. Show all posts

ನಿದ್ದೇನ ಕದ್ದವಳು


ಬರೆಯುವ ಮೊದಲೆ ಅಕ್ಷರವ ಕದಿಯೋಳು

ಬರೆದಾದ ಮೇಲೂ ನಿದ್ದೇನ ಕದ್ದವಳು

ನನ್ನೆದುರಿಗೆ ಬಂದಾಗ ಏನು ಮಾಡಲಿ

ಅವಳೇನಾದರೂ ಕೇಳಿದರೆ ಏನು ಹೇಳಲಿ?

 

ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು

ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು

ಮಾತಿಗೆ ಎದುರಾಡದೆ ನಿಂತಾಗ

ನಕ್ಕು ಓಡಿದರೆ ನಾನೇನೂ ಮಾಡಲಿ?

 

ಕದ್ದ ಮಾಲು ಪಡೆಯುವುದಾದರು ಹೇಗೆ

ಕದ್ದ ಕನಸು, ಮನಸು ಬರುವುದೇ ಹಾಗೆ

ನೀವಾದರೂ ಸ್ವಲ್ಪ ಹೇಳಿ ಅವಳಿಗೆ

ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ ಮನಸ್ಸು ಕೊಡಲಿ

ಯುಗಾದಿ

ಗೆಲ್ಲುವ ಚಲವಿತ್ತು
ಅಭಿಮಾನದ ಹರಿವಿತ್ತು
ಸಾಹಸ,ಸಾಧನೆ ತೋರಿದ ಧೋನಿಗೆ
ದೇವರೆ ನೀಡಿದ ಈ ಅಣಿಮುತ್ತು

ಜಯಹೋ ಇಂಡಿಯಾ
ಎದುರಾಳಿ ಯಾರಾದರೂ
ಹರಸುವಾಗ ಕೋಟಿ ಹೃದಯ
ನಿಮಗಿಲ್ಲ ಯಾರ ಭಯ

ಆ ಸ್ಥಳವೇ ಭಾರತದ ವಾಂಖೆಡೆ
ಜಗದ ಗಮನವೆಲ್ಲ ಅದರ ಕಡೆ
ಭಾಗ್ಯದ ಲಕ್ಷ್ಮಿ ನಮ್ಮಮ್ಮ
ಯುಗಾದಿಗೆ ಹರಸಿದಳು ಧೋನಿ ಪಡೆ

ಭಾಗ್ಯದ ಭಾರತದ ವಾಸಿಗಳೆಲ್ಲ
ಬಾಳಲಿ ಹರುಷದಿ ವರುಷವೆಲ್ಲ
ಧೋನಿ ಕಂಡ ಹರುಷದ ಯುಗಾದಿ
ಹರಡಲಿ ಹರುಷ ಜಗಕೆಲ್ಲ

ಬಂತೊಂದು ಹೊಸ ವರುಷ

ಹಳೆದು ಬಸವಳಿದು
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ

ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ

ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ

ವರುಷವಿಡಿ ಇರಲಿ
ಎಲ್ಲ ನಲಿದಾಡೋ ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ

ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ

ಮೌನವೇ ಮಾತಾಗಿ

ನಡೆದು ಬಾ ಬಳಿಗೆ
ಸುಮ್ಮನೆ ಹಾಗೆ
ಮಾತೊಂದು ಆಡಬೇಡ
ನಗುವೊಂದಿರಲಿ ಜೊತೆಗೆ

ಕಣ್ಣುಗಳೇ ಮಾತಾಡುವಾಗ
ಬೇರೆ ಮಾತೇಕೆ ಈಗ
ಮೌನದಿ ಹೃದಯದ ಭಾಷೆ
ಕೇಳಲು ಎಂಥ ಸೊಗಸೆ

ಪ್ರೀತಿಯ ಮೂಟೆ ಹೊತ್ತು
ಅದರಲಿ ಸಾವಿರ ಕನಸನಿತ್ತು
ಜೊತೆ ಬಾರೆ ಮೆಲ್ಲಗೆ
ಮೌನದ ಆಭರಣ ಇರಲಿ ತೆಳ್ಳಗೆ

ಮೌನದಿ ಬೇಡ ಮಾತಿನ ಮೋಹ
ಆರದು ಎಂದು ಪ್ರೀತಿಯ ದಾಹ
ನೀನಿರದ ಸನಿಹ
ಭರಿಸಲಾಗದು ವಿರಹ

ನೆರೆ ಹೊರೆ

ನೆಲ ಬಿರಿದಿತ್ತು
ಕಾಣಲೊಂದು ಹುಲ್ಲು ಇರಲಿಲ್ಲ
ಮೈಯನ್ನೆ ಸುಡುವ ಬಿಸಿಲು
ಸ್ವಚ್ಛ ನೀಲಿ ಆಕಾಶದ ಹೊರತು
ಜೀವ ತಣಿಸೋ
ಮಳೆಯ ಮೋಡಗಳಿರಲಿಲ್ಲ

ರೈತ ಆಕಾಶಕೆ ಕೈ ಮುಗಿದಾಯಿತು
ತಲೆ ಮೇಲೆ ಕೈ ಹೊತ್ತು ಕೂರಬೇಕಾಯಿತು
ಊರದೇವರ ಜಾತ್ರೆಯಾಯಿತು
ಕಪ್ಪೆಗಳ ಮದುವೆಯಾಯಿತು
ಇಲ್ಲ ಇಲ್ಲ
ಒಂದೇ ಒಂದು ಹನಿ ಮಳೆಯಾಗಲಿಲ್ಲ

ಎಲ್ಲೆಡೆ ನಿಟ್ಟುಸಿರು
ಸಾಲದ ಕರಿನೆರಳು
ಸಾವಿಗೆ ಶರಣಾಯಿತು ಜೀವ
ಬಿರಿದ ಹೊಲದಲ್ಲಿ ವಿಷ ಕುಡಿದ ದೇಹ
ಒಣಗಿದ ಮರದಲ್ಲೂ ನೇತಾಡಿತು ಜೀವ
ಕಣ್ಣೀರೊಂದೇ ಕಾಣಬೇಕಾಯಿತು

ಅದೊಂದು ಮಳೆ
ಎಲ್ಲಿ ಅಡಗಿತ್ತೋ
ಭುವಿ-ಬಾನು ಒಂದಾಗುವಂತೆ ಗುಡುಗಿತು
ಅಬ್ಬಾ! ಅದೇನು ಮಳೆಯೋ?
ನೆಲ-ಜನ-ಪ್ರಾಣಗಳೆಲ್ಲ ಅಯೋಮಯ
ನೀರು-ನೀರೆಂದು ಹಾತೊರೆದವರ
ಮನೆಯೇನು, ಪ್ರಾಣವು ನಡುಗಿತು

ನೊಂದ ಮನದ ಆಕ್ರಂದನಕೆ
ಹಲವು ಹೃದಯಗಳು ಮಣಿದವು
ತುಂಬಿದ ಹೊಳೆಯಂತೆ ಹರಿದಿತು
ನೆರವಿನ ಮಹಾಪೂರ
ನವಗ್ರಾಮಗಳ ನಿರ್ಮಾಣಕೆ
ಬುನಾದಿ ಹಾಕಿದರು ಹಲವರು

ಇಚ್ಚಾಶಕ್ತಿ ಮೆರೆಯಲಿ ಮೇಲಾಗಿ
ದುಡಿಯಲಿ ಎಲ್ಲ ಸಕ್ರಿಯವಾಗಿ
ನೊಂದವರ ಕಣ್ಣೀರು ಒರೆಸಲಿ
ರಾಜ್ಯವಾಳುವ ಕೈಗಳು
ನಲುಗಿದವರು ಮತ್ತೊಮ್ಮೆ ನಸುನಗಲಿ
ಹಸಿದವರ ಬದುಕು ಹಸನಾಗಲಿ

ಕಣ್ಣಾ ಮುಚ್ಚಾಲೆ

ಕಾಡುತ್ತೀಯಲ್ಲೆ
ನಲ್ಲೆ
ನನ್ನ ಕುಂತಲ್ಲೇ
ಆಡಿಸುತ್ತೀಯಲ್ಲೆ

ಕಾಡುತ್ತೀಯಲ್ಲೆ
ಕನಸಲ್ಲೂ ಕಾಡುತ್ತೀಯಲ್ಲೆ
ಓಡಾಡ್ತಿಯಲ್ಲೇ
ಮನಸೊಳಗೆಲ್ಲ ನಿಲ್ಲದೆ
ಕುಣಿದಾಡ್ತೀಯಲ್ಲೆ

ಕ್ಷಣ ಬಿಟ್ಟರೂ ನೀ ಲೋಕ ಸಂಚಾರಿ
ನೀ ಒಪ್ಪಿದರೆ ನಾ ಸಂಸಾರಿ
ಚಂಚಲೆ
ನಿಲ್ಲು ಅಲ್ಲೇ
ನಿಂತರು ನೀ ನನ್ನ ಕಾಡುತ್ತೀಯಲ್ಲೆ

ನೀನು ಪದವಾಗಿ
ಹಾಡಿಗೆ ಶೃತಿಯಾಗಿ
ಹಿಡಿಬೇಕು ಅಂದ್ಕೊಂಡ್ರು
ಸಿಗದೇ ನೀ ಓಡ್ತಿಯಲ್ಲೆ
ಪದಗಳಿಗೂ ಸಿಗದೇ ಕಾಡಿಸಿ ಓಡ್ತಿಯಲ್ಲೆ

ಪ್ರೀತಿಯ ಎಳೆ ಎಳೆದು
ಪ್ರೇಮದ ಬಲೆ ಹೆಣೆದು
ಹೇಗೋ ಇದ್ದವನ ಹಿಡಿದೆಳೆದು
ಕೆಡವಿ ಬೀಳಿಸಿದೆಯಲ್ಲೇ
ನನ್ನ ಸೆರೆ ಹಿಡಿದೆಯಲ್ಲೆ

ನಿಲ್ಲೇ ನನ್ನ ನಲ್ಲೆ
ನನ್ನ ಪ್ರೀತಿಯ ಬೇಡವೆಂದೆಯಲ್ಲೆ
ಆದರೂ ನಿನ್ನ ನೆನೆಯುತ
ನಾ ಕುಂತೆನಲ್ಲೆ
ನಿನ್ನೊರತು ನನಗ್ಯಾರು
ಬೇಡವಲ್ಲೆ ನಲ್ಲೆ

ನಡುಗುತಿದೆ ಇವನ ನಡೆಗೆ

ಹೆದರಿಕೆ ಶುರುವಾಗಿದೆ
ಯಾಕೋ ಅಮಾವಾಸ್ಯೆಗೆ
ತನ್ನೊಡಲ ಕಗ್ಗತ್ತಲಿನಲೂ
ಸಾಗುವ ಖದೀಮರ ನಿರ್ಭೀತ ನಡೆಗೆ

ಹಣವು ಅಳುತಲಿದೆ
ಹೆಣವು ಅಂಜಿದೆ
ಹಣಕಾಗಿ ಹೆಣವನ್ನು ಕದ್ದೊಯ್ಯುವ
ಲೋಭಿಗಳ ಹಾಳು ನಡೆಗೆ

ಭೂಮಿಯು ನಡುಗುತಿದೆ
ಕಾಡೆಲ್ಲೋ ಮರೆಯಾಗುತಿದೆ
ಕಾಸಿಗಾಗಿ ಮಣ್ಣನು ಬಿಡದ
ಮಾನವನ ಅತಿಆಸೆಯ ನಡೆಗೆ

ನೀರೆಲ್ಲ ನಾಪತ್ತೆ
ಉಸಿರೆಲ್ಲ ವಿಷವಂತೆ
ನೀರಲ್ಲೂ, ಉಸಿರಲ್ಲೂ ವಿಷವ ಹರಡೋ
ದಾನವ ರೂಪಿಯ ನಡೆಗೆ

ನಡುಗುತಿದೆ ಇವನ ನಡೆಗೆ
ಭುವಿ-ಬಾನೆಲ್ಲ
ಮೂಕವಾಗಿಯ ನೋಡುತಿದೆ
ಕಾಯುತ ಕಾಲ

ಈ ಸೌಂದರ್ಯಕೆ

ಕೆನ್ನೈದಿಲೆಯ ಹುಡಿ ಮಾಡಿ
ಚಂದ್ರನ ಬೆಳದಿಂಗಳ ಹಾಲ ಮಾಡಿ
ಕಲಸಿ ಮಾಡಿದ ಮೊಗ
ಕಡು ಅನ್ಧಕಾರದಲು
ಮಿನುಗುವುದು ಜಗ-ಮಘ

ಜಿಂಕೆಗಳ ಕೊಂದು
ಕಣ್ಣಿಟ್ಟನೊ ಬ್ರಹ್ಮ
ಈ ಸೌಂದರ್ಯಕೆ
ಅಲ್ಲಲ್ಲಿ ಸುಳಿಯುವ
ಹೂವ ಮುಂಗುರುಳು

ಹಂಸಗಳ ವಧೆ ಮಾಡಿ
ರೆಕ್ಕೆಗಳ ಕೊಯ್ದು ತಂದು
ಮಾಡಿದನೆ ಬ್ರಹ್ಮ
ಚೆಲುವೆಯ ಕಣ್ರೆಪ್ಪೆಗಳ

ಹೂವ ಮಕರಂಧವನೆಲ್ಲ
ಕೂಡಿಸಿ
ಹಾಲ ನೊರೆಯಿಂದ ಮುಳುಗಿಸಿ
ಹೆಣೆಯಿತೇ ಬೊಮ್ಮನ ಕೈಗಳು
ಸವಿಯ ಚೆನ್ದುಟಿಯ

ಹಾಲ ಕೊಳದಿ ಬೆಳೆದ
ಕೆಂಪು ಕಮಲವ ಆಯ್ದು ತಂದು
ಜೇನು ಗಂಧಗಳ ಬೆರೆಸಿ
ಅರೆದು ಮಾಡಿದನೆ
ಸೌಗಂಧದ ಚೆಲುವ ಮೈ ಸಿರಿಯ

ಈ ಚೆಲುವೆ
ಕೈ ಯಾಡುವೆಡೆ
ಬಿರುಗಾಳಿ ತಂಗಾಳಿ ಯಾಗುವುದು
ಇವಳು ನಡೆದಾಡು ವೆಡೆ
ಮರುಭೂಮಿ ಹಸಿರು ಕಾನನವಾಗುವುದು

ನಿನ್ನ ಸೌಂದರ್ಯಕೆ
ಪದಗಳೇ ನಿಲುಕವು
ಹಾಡಿ ಹೊಗಳಲೆಂದರೆ
ನಿನ್ನ ನೋಡುತಲೇ
ಎಲ್ಲ ಮರೆವವು

ಹೇಳೆ ಚೆಲುವೆ
ನಿನ್ನ ವರ್ಣಿಸೋ ರಸಿಕನಾರು?
ನಿನ್ನ ಸೌಂದರ್ಯಕೆ
ಸಿಲುಕುವ ಪದಗಳಾವು

ಹೇಳು ನೀನು ನನಗೆ

ಹಕ್ಕಿ ಹಾಡುವ ಮುನ್ನ
ಹೇಳು ನೀನು ನನಗೆ
ಹಾಡಿನೊಂದಿಗೆ ಹೃದಯದ
ಬಡಿತ ಸೇರಿಸಬೇಕಿದೆ
ಅವಳಿಗೆ ಈ ಪ್ರೀತಿ ತಿಳಿಸಬೇಕಿದೆ

ರವಿ ಮೂಡುವ ಮುನ್ನ
ಹೇಳು ನೀನು ನನಗೆ
ಹಾಡೋ ಹಕ್ಕಿಯ ಕಲೆತು
ನಾನು ಹಾಡಬೇಕಿದೆ
ಅವಳಿಗೆ ಈ ಪ್ರೀತಿ ತೋರಬೇಕಿದೆ

ಗಾಳಿ ಸೋಕುವ ಮುನ್ನ
ಹೇಳು ನೀನು ನನಗೆ
ಹೂ ಗಂಧ ತರೋ ತಂಗಾಳಿಗೆ
ಈ ಪ್ರೀತಿ ಬೆರೆಸಬೇಕಿದೆ
ಅವಳಿಗೆ ಈ ಪ್ರೀತಿ ನೀಡಬೇಕಿದೆ

ವಿರಹಗೀತೆ

ಅಂಗಳದಲಿ ತಿಂಗಳು ಇಳಿದರು
ಕಾಣಲಿಲ್ಲ ನಿನ್ನ ಕಂಗಳು
ನಿನ್ನ ವಿರಹದಲ್ಲಿಯೇ
ಬರೆದು ಬರೆದು
ಸೋತವು ನನ್ನ ಕೈಗಳು

ಹತ್ತಾರು ಪ್ರೇಮ ಪುಸ್ತಕಗಳ
ನೂರೆಂಟು ಸಾಲುಗಳ ಹೆಕ್ಕಿ ತಂದೆ
ಅಕ್ಕರೆಯಲಿ ಅಕ್ಷರವ ಜೋಡಿಸುತ
ಬಳಲಿದೆ, ಬಾಡಿ ಬೆಂಡಾದೆ
ವಿರಹಗೀತೆ ಪ್ರೇಮಗೀತೆ ಆಗದೆ
ಉಳಿದೋಯಿತು, ಹರಿದು ಕಡಲಾಯಿತು

ನೂರಾರು ಪ್ರೇಮಿಗಳ ಕಂಡು
ಮಾತಾಡಿಸಿದೆ, ಕೇಳಿ ತಿಳಿದೆ
ಹೇಗೆಂದು ನಿನ್ನ ಒಲಿಸುವುದು
ಕಥೆ, ಕವನ, ಕಾವ್ಯ
ಓದುವುದು ಬಿಟ್ಟೆ, ಸುಟ್ಟೆ
ನೀನಿಲ್ಲದೇ ಕವಿತೆಗಳೆಲ್ಲ ಜಾಳಾದವು
ಕನಸಲ್ಲು ಕಣ್ಣು ನೀರಾದವು

ಹೊರಟೆ ನೀನು ಎಲ್ಲಿಗೆ?

ಬೆಳಕು ಮೂಡುವ ಮುನ್ನ
ಓಡುವೆ ನೀನು ಎಲ್ಲಿಗೆ?
ಇನ್ನೂ ರವಿ ಬಂದಿಲ್ಲ
ಉಷೆ ಅವನ ಜೊತೆಗಿಲ್ಲ
ನನ್ನ ಕನಸಲ್ಲಿ ತುಸು ಹೊತ್ತು
ನಿಲ್ಲದೆ ಹೋಗುವೆ ಈಗ ಎಲ್ಲಿಗೆ?

ನೀ ಕದ್ದ ಕನಸುಗಳು
ಬೇಕಿವೆ ಇಂದಿಗೆ
ನೀ ನನ್ನ ಬಿಟ್ಟು ಓಡಬೇಡ ಮಲ್ಲಿಗೆ
ನಾವಿಬ್ಬರು ಕೂಡಿ ಹೆತ್ತು
ಸಾಕಿ ಸಲುಹಿದ ಕನಸುಗಳ
ಕದ್ದು ಓಡುವುದಾದರು ಎಲ್ಲಿಗೆ?

ಕನಸ ರಾತ್ರಿಗಳಿಗೆ
ಬೆಳಕಿಲ್ಲೆಂದು ಅನ್ಜಬೇಡ
ಮನಸ ಬತ್ತಿ ಮಾಡಿ ಹಚ್ಚಿಹೆನು
ನನ್ನ ಜೊತೆ ನಡೆ ಮಲ್ಲಿಗೆ
ನೀನು ನಡೆಯುವರೆಗೂ
ಬರುವೆ ಜೊತೆಗೆ

ಆದರೆ,
ನನ್ನ ಬಿಟ್ಟೊಡಬೇಡ ಮನಮಲ್ಲಿಗೆ

ಎಳ್ಳು-ಬೆಲ್ಲದ ಹುಡುಗಿ

ಕಾದು ಕುಳಿತಿಹೆನು ಹುಡುಗಿ
ನೀ ಬಂದೆ ಬರುವಿಯೆಂದು
ಎಳ್ಳು-ಬೆಲ್ಲ ತರುವಿಯೆಂದು

ಹೋದ ಸಲ ಜಡೆಯೆಳೆದು
ಕೆಣಕಿದ್ದು ನೆನಪಿದೆಯ?
ನಿನ್ನ ಬಣ್ಣ ಬಣ್ಣದ
ಮಾತಿಗೆ ಮರುಳಾಗಿ
ಬೆಲ್ಲದಂತಹ ಮುತ್ತ ನೀಡಿದ್ದು
ಮರೆತಿರುವೆಯ ಹುಡುಗಿ?

ಎಳ್ಳು-ಬೆಲ್ಲದ ಸಂಕ್ರಾಂತಿಯಂದು
ಮನೆಗೆ ನೀ ನಲಿಯುತ ಬಂದು
‘ಆಂಟಿ’ ಎಂದು ಮೆಲ್ಲಗೆ ಕರೆಯಲು
ಮೂಲೆಯಲಿ ಅವಿತು ಕುಳಿತ ನಾನು
ಎದ್ದೋಡಿ ಬರುವೆ
ನಿನ್ನ ಕೂಡಿ ನಲಿವೆ

ನನ್ನ ಅಮ್ಮನಿಗೆ ನೀನೇನು
ಹೇಳುವ ಹಾಗಿಲ್ಲ
ಸೊಸೆಯಾಗುವವಳ ಗುಟ್ಟು ರಟ್ಟಾಗುವುದಲ್ಲ
ಅಮ್ಮನಿಗೆ ಒಳ್ಳೆಯ ಮಗನು ನಾನು
ನೀನೇಳಲು ಅವಳು ನಂಬೋದಿಲ್ಲ

ಕಾಯುತಿರುವೆನು ಹುಡುಗಿ
ಕಾಯಿಸದಿರು ನನ್ನ ಬೆಡಗಿ
ನಿನ್ನ ಬರುವಿಕೆಯ ಘಳಿಗೆ ಎಣಿಸುತಿಹೆನು
ನಿನ್ನಾಗಮನದಿನ್ದಲೆ ನಾನು ಬದುಕುವೆನು

ಒಬಾಮ

ಒಲಿಯುವನೆ ಒಬಾಮ?
ಹೊಸ ಮುನ್ನುಡಿ ಬರೆವೆನೆಂದ
ಅಮೆರಿಕಕ್ಕೆ ಬೆಳಕ ತರುವೆನೆಂದ
ಭಾರತದ ಐ, ಟಿ, ಗಳ ಪಾಲಿಗೆ
ಒಲಿದು ಬರುವನೇ?

ಶ್ವೇತ ವರ್ಣಿಗಳ ಮಧ್ಯ ಸೆಣೆಸಿ
ಕಲ್ಲು-ಮುಳ್ಳಿನ ಹಾದಿಯ ಸವೆಸಿ
ದೊಡ್ಡಣ್ಣ ಅಮೇರಿಕಾದ
ದೊಡ್ಡ ಹುದ್ದೆಗೇರಿದ ಒಬಾಮ
ಒಲಿದು ಬರುವನೇ?

ಭಯೋತ್ಪಾದನೆಯ ತೊಳೆವೆನೆಂದ
ಶಾಂತಿ ಕಹಳೆ ಊದುವೆನೆಂದ
ಹಣಕಾಸಲಿ ಬೆಳೆದು ಬಸವಳಿದ
ಅಮೆರಿಕದಲ್ಲಿ ಮತ್ತೆ ಕ್ರಾಂತಿ ತರುವೆನೆಂದ
ಒಬಾಮ ಒಲಿದು ಬರುವನೇ?

ನಮ್ಮ ಹುಡುಗನಿಗೆ ಒಂದು ಹುಡುಗಿ ಬೇಕಾಗಿದೆ

ಅವನು ನಮ್ಮೂರ ಹುಡುಗ
ಪ್ರೀತಿಯಲಿ ಒಂಟಿಸಲಗ
ತನ್ನವರ ಕಾಯೋ ಗಿಡುಗ
ಗುಣದಲ್ಲಿ ಅಪರಂಜಿಯೋ

ಮಾತಿನಲ್ಲೇ ಗೆಲ್ಲೋ ಜಾಣ
ಶೌರ್ಯದಲ್ಲಿ ವೀರ ರಾಣ
ಪ್ರೀತಿಗೆ ಸೋಲುವ ಗುಣದ
ವಾತ್ಸಲ್ಯದ ಕಾರನ್ಜಿಯೋ

ರೂಪದಲ್ಲಿ ಮನ್ಮಥನಿವನು
ನೀತಿಯಲಿ ಪಂಡಿತನಿವನು
ರೀತಿಯಲಿ ಎಲ್ಲರಿಗು ಮಾದರಿ
ನಡೆ ಬಂಗಾರದವನು

ನಮ್ಮೂರ ಅಪರಂಜಿಗೆ
ಮಲೆನಾಡ ಗುಣಸಂಪನ್ನಗೆ
ಮುತ್ತಿನಂಥ ಜೋಡಿಯಾಗೋ
ಹುಡುಗಿ ಬೇಕಾಗಿದೆ

ನಮ್ ಕಾಲದಾಗೆ ಹಿನ್ಗಿರಲಿಲ್ಲ ಮಗ

ನಮ್ ಕಾಲದಾಗೆ ಹಿನ್ಗಿರಲಿಲ್ಲ ಮಗ
ಬಾಸು-ಗೀಸು ಅನ್ನೋದನ್ನ ಕೇಳಿರಲಿಲ್ಲ ಜಗ

ಬೆಳಬೆಳಗ್ಗೆನೆ ಎದ್ದು ಗೇಮೆಗೆ ಹೊಲಕ್ಕೊಯ್ತಿದ್ವು
ತನ್ಗ್ಳಿಟ್ಟು-ಸೊಪ್ಪು ಸಿಕ್ರೆ ಅದೇ ಸ್ವರ್ಗ ಅಂತ ತಿನ್ತಿದ್ವು
ನೆಲ-ಜಲ ಅಂದ್ರೆ ಭೂಮ್ತಾಯಿ ಅಂತಿದ್ವು
ಊರವ್ರೆಲ್ಲ ನಮ್ಮವ್ರೆ ಅಂತ ಕರಿತಿದ್ವು

ಗಡಿಯಾರದಂಗೆ ಕಾಲನು ಬದಲಾಯಿತು ಮಗ
ನಮ್ಮಾದಾದ್ರೂ ಭೂಮಿ ಕೇಳೊನ್ಗಿಲ್ಲ ಈಗ

ಬೆಳಬೆಳಗ್ಗೆನೆ ಎದ್ದು ಗೇಮೆಗೆ ಆಫಿಸ್ಗೋಯ್ತಾರೆ
ಇಡ್ಲಿ-ದೋಸೆ ಬಿಟ್ಟು ಪಿಜ್ಜ-ಗಿಜ್ಜ ಅಂತ ಅದೇನೋ ತಿಂತಾರೆ
ಕಂಡವ್ರ ನೆಲ ಸಿಕ್ರೆ ಸಾಕು ಬಾಚಿಕೊಳ್ತಾರೆ
ಪಕ್ಕದ್‍ಮನೆಯವನು ಸತ್ರು ಯಾರೋ ಹೋಗೋ ಅಂತಾರೆ

ನಮ್ ಕಾಲದಾಗೆ ಹಿನ್ಗಿರಲಿಲ್ಲ ಮಗ
ಕೇಸು-ಫೀಸು ಅಂತೂ ಅಲಿತಿರಲಿಲ್ಲ ಆಗ

ಅದೇನೋ ಸಾಫ್ಟ್‌ವೇರು-ಹಾರ್ಡ್‌ವೇರು
ಅಂತ ಬಾಯೀ ಬಡ್ಕೊಂತಾರಲ್ಲೋ
ಐಟಿ-ಬಿಟಿ ಅಂತ ಬಂದು
ಹೊಲದಾಗೇ ಕೆಲ್ಸ ಬಿಟ್ಟೆ ಬಿಟ್ರಲ್ಲೋ

ಜಾತಿ-ಧರ್ಮ ಅಂತ ಹೊಡೆದಾಡ್ತ ಕುಂತವ್ರೋ
ಏನಕ್ಕೂ ಇರಲಿ ಅಂತ ಬಾಂಬು ತನ್ದವ್ರೊ
ಬೇಲಿನೆ ಎದ್ದು ಹೊಲ ಮೇಯೊ ಕಾಲ ಬಂದಿದೆ
ದೇಶ-ಭಾಷೆಗೆ ಅಪಾಯದ ಸುದ್ಧಿ ತಂದಿದೆ

ನನ್ನ ಕನಸ ಮೇಲೆ ಅವಳ ಕಣ್ಣು

ನನ್ನ ಕನಸ ಮೇಲೆ ಅವಳ ಕಣ್ಣು
ಎಲ್ಲಿ ಹೋದರೂ ಬಿಡಲೊಲ್ಲಳು
ಕಣ್ಮುಚ್ಚಿದರೆ ಸಾಕು ರೆಪ್ಪೆಯ
ದಾಟಿ ಬರುವಳು

ಕನಸಲಿ ಹೊಸ ಕಾರು
ಕೊಳ್ಳುವ ಹಾಗಿಲ್ಲ
ಜೋಕಾಲಿಯಲಿ ಕೂತು
ಹಾರುವ ಹಾಗಿಲ್ಲ
ಅಲ್ಲಿಯೂ ಬಂದು 'ಸರಿ-
ನನಗೂ ಜಾಗ ಬಿಡು'
ಎಂದು ಗದರಿಸುವಳು
ನನ್ನ ಸರಿಸಿ ಕೂತುಬಿಡುವಳು

ಕನಸಲಿ ಎಲ್ಲವೂ ಸಾಧ್ಯವೆಂದು
ಮಂಜಿನ ಮನೆಯ ಕಟ್ಟಿ
ಕಾಮನಬಿಲ್ಲನ್ನು ತೋರಣ ಮಾಡಿ
ಶಿವನ ಪೂಜೆಗೆ ಕರೆದಿದ್ದೆ
ನಳನನ್ನು ಅಡಿಗೆಗೆ ಬರಹೇಳಿದ್ದೆ
ಅಲ್ಲಿಯೂ ಬಂದಳು
ಅಡಿಗೆಗೆ ಹುಳಿ ಹಿಂಡಿ
ಶಿವನ ಪೂಜೆಗೆ ಅವಳೊಬ್ಬಳೆ ಕುಳಿತಳು

ಎಲ್ಲಿ ಸಿಕ್ಕರೂ ಬಿಡೆನು ಇನ್ಮುಂದೆ
ಕಲ್ಲು ಸಕ್ಕರೆ ಕನಸ ಪಾಯಸಕ್ಕೆ
ನೊಣವಾಗಿ ಬಿದ್ದವಾಳ ಹಿಡಿದು
ರೆಪ್ಪೆಯಿಂದ ಹೊರಗೆಸೆದುಬಿಡುವೆ
ಕನಸ ಹೊರಗು ಕಾಡುವ
ಬಜಾರೀ ಹೆಣ್ಣಿನ ಸೊಕ್ಕನು
ಮತ್ತೆ ಕನಸಲಿ ಮಣಿಸಿ ಬಿಡುವೆ

ಪಯಣ

ಎಲ್ಲಿಗೆ ಸಾಗಿದೆ ಪಯಣ
ಕಡಲಾಳಕೊ
ಹಿಮಾಲಯದ ತುದಿಗೋ
ಕಗ್ಗತ್ತಲಲಿ ಕಳೆಯುವ
ಭಯ ಕಾಡಿದೆ

ನಾವುಗಳೆಲ್ಲ ಕಳೆದೆವು ಇಲ್ಲಿ
ನಾನು ಮಾತ್ರ ಉಳಿದೆನು
ನಮ್ಮವರೆಲ್ಲ ಆಳಿದರು
ನನ್ನವರು ಮಾತ್ರ ಉಳಿದರು

ತಿಳಿದ ಜೀವಿಗಳ
ನೋವು ಉಳಿದಿದೆ
ಮಹಾ ಪರ್ವತಗಳಾಗಿ
ಎಂದು ಸಿಡಿಯುವುದೋ
ಅಂದೇ ಜಗತ್ಪ್ರಳಯ

ನಿನ್ನ ಮನವೇಕೋ ಕರಗದು

ಕಲ್ಲು ಕಾಲಾನ್ತರದಲ್ಲಿ
ನೀರೊಡನೆ ಮ್ರುದುವಾಗುವುದು
ಮುಳ್ಳಿನ ಗಿಡದಿ
ಚೆಲುವಿನ ಹೂವು ಅರಳುವುದು
ಕಾಠಿಣ್ಯದಿನ್ದ ಮ್ರುದುತ್ವಕ್ಕೆ
ಉದಾಹರಣೆಗಳು ಹಲವು
ನಿನ್ನ ಮನವೇಕೋ
ಕರಗದು ನನ್ನ ಪ್ರೀತಿಗೆ
ಉರುಳಿದರು ಶತಶತಮಾನಗಳು
ನನಗೆ ಒಂದೊಂದು
ಕ್ಷಣವೂ ಒಂದೊಂದು
ಶತಮಾನ

ನನ್ನ ಪ್ರೀತಿ

ನನ್ನ ಪ್ರೀತಿಯ ಸಾಲುಗಳಿವು
ಕವನವಾಗಬೇಕೆಂದೇನು ಇಲ್ಲ
ಆಗದಿದ್ದರೆ ನನ್ನ ಪ್ರೀತಿಗೆ
ಪೀಠಿಕೆಯಾದರೂ ಆಗಲಿ

ನನ್ನ ಪ್ರೀತಿ ನಿನಗೆ
ಇಷ್ಟವಾಗಬೇಕೆಂದೇನು ಇಲ್ಲ
ಆಗದಿದ್ದರೂ ನಾ ನಿನ್ನ
ಪ್ರೀತಿಸುವುದ ಬಿಡುವುದಿಲ್ಲ

ನಿನ್ನೀ ಮೊಗದಿ
ನಗು ಕಳೆ ತುಮ್ಬಿರೆ ಸಾಕು
ಸಾರ್ಥಕ ನನ್ನ
ಬದುಕು, ಪ್ರೀತಿ

ಕಾಡುವೆ ಏಕೆ?

ಕಾಡುವೆ ಏಕೆ ಗೆಳೆತಿ
ನೀ ಎದುರಿಗಿದ್ದರು?
ಮಾತನಾಡದೇ ನನ್ನೊಡನೆ
ನಿನ್ನ ಚಂದ್ರ ಮೊಗವ ತೋರದೇ.

ನಿನ್ನ ಕಣ್ಣ ಕಾಂತಿಗಳಿಲ್ಲದೆ
ಈ ಗೆಳೆತನ ಕತ್ತಲಾಗಿದೆ
ನಿನ್ನ ಮುನಿಸು ಮೊಗವ
ನೋಡಿ ಬಳಲುತಿದೆ ಈ ಸ್ನೇಹ

ನಿನ್ನ ಮನದ ಬಯಕೆಯ
ತುಸು ಬೇಗ ತಿಳಿಸು ಗೆಳೆತಿ
ಸ್ನೇಹದ ತಡೆಗೋಡೆಗಳ
ದಾಟಿ ಬರುವೆನು ಬೇಗ