ನೆರೆ ಹೊರೆ

ನೆಲ ಬಿರಿದಿತ್ತು
ಕಾಣಲೊಂದು ಹುಲ್ಲು ಇರಲಿಲ್ಲ
ಮೈಯನ್ನೆ ಸುಡುವ ಬಿಸಿಲು
ಸ್ವಚ್ಛ ನೀಲಿ ಆಕಾಶದ ಹೊರತು
ಜೀವ ತಣಿಸೋ
ಮಳೆಯ ಮೋಡಗಳಿರಲಿಲ್ಲ

ರೈತ ಆಕಾಶಕೆ ಕೈ ಮುಗಿದಾಯಿತು
ತಲೆ ಮೇಲೆ ಕೈ ಹೊತ್ತು ಕೂರಬೇಕಾಯಿತು
ಊರದೇವರ ಜಾತ್ರೆಯಾಯಿತು
ಕಪ್ಪೆಗಳ ಮದುವೆಯಾಯಿತು
ಇಲ್ಲ ಇಲ್ಲ
ಒಂದೇ ಒಂದು ಹನಿ ಮಳೆಯಾಗಲಿಲ್ಲ

ಎಲ್ಲೆಡೆ ನಿಟ್ಟುಸಿರು
ಸಾಲದ ಕರಿನೆರಳು
ಸಾವಿಗೆ ಶರಣಾಯಿತು ಜೀವ
ಬಿರಿದ ಹೊಲದಲ್ಲಿ ವಿಷ ಕುಡಿದ ದೇಹ
ಒಣಗಿದ ಮರದಲ್ಲೂ ನೇತಾಡಿತು ಜೀವ
ಕಣ್ಣೀರೊಂದೇ ಕಾಣಬೇಕಾಯಿತು

ಅದೊಂದು ಮಳೆ
ಎಲ್ಲಿ ಅಡಗಿತ್ತೋ
ಭುವಿ-ಬಾನು ಒಂದಾಗುವಂತೆ ಗುಡುಗಿತು
ಅಬ್ಬಾ! ಅದೇನು ಮಳೆಯೋ?
ನೆಲ-ಜನ-ಪ್ರಾಣಗಳೆಲ್ಲ ಅಯೋಮಯ
ನೀರು-ನೀರೆಂದು ಹಾತೊರೆದವರ
ಮನೆಯೇನು, ಪ್ರಾಣವು ನಡುಗಿತು

ನೊಂದ ಮನದ ಆಕ್ರಂದನಕೆ
ಹಲವು ಹೃದಯಗಳು ಮಣಿದವು
ತುಂಬಿದ ಹೊಳೆಯಂತೆ ಹರಿದಿತು
ನೆರವಿನ ಮಹಾಪೂರ
ನವಗ್ರಾಮಗಳ ನಿರ್ಮಾಣಕೆ
ಬುನಾದಿ ಹಾಕಿದರು ಹಲವರು

ಇಚ್ಚಾಶಕ್ತಿ ಮೆರೆಯಲಿ ಮೇಲಾಗಿ
ದುಡಿಯಲಿ ಎಲ್ಲ ಸಕ್ರಿಯವಾಗಿ
ನೊಂದವರ ಕಣ್ಣೀರು ಒರೆಸಲಿ
ರಾಜ್ಯವಾಳುವ ಕೈಗಳು
ನಲುಗಿದವರು ಮತ್ತೊಮ್ಮೆ ನಸುನಗಲಿ
ಹಸಿದವರ ಬದುಕು ಹಸನಾಗಲಿ

No comments: