ಕೆನ್ನೈದಿಲೆಯ ಹುಡಿ ಮಾಡಿ 
ಚಂದ್ರನ ಬೆಳದಿಂಗಳ ಹಾಲ ಮಾಡಿ 
ಕಲಸಿ ಮಾಡಿದ ಮೊಗ 
ಕಡು ಅನ್ಧಕಾರದಲು 
ಮಿನುಗುವುದು ಜಗ-ಮಘ 
 
ಜಿಂಕೆಗಳ ಕೊಂದು 
ಕಣ್ಣಿಟ್ಟನೊ ಬ್ರಹ್ಮ 
ಈ ಸೌಂದರ್ಯಕೆ 
ಅಲ್ಲಲ್ಲಿ ಸುಳಿಯುವ 
ಹೂವ ಮುಂಗುರುಳು 
 
ಹಂಸಗಳ ವಧೆ ಮಾಡಿ 
ರೆಕ್ಕೆಗಳ ಕೊಯ್ದು ತಂದು 
ಮಾಡಿದನೆ ಬ್ರಹ್ಮ 
ಚೆಲುವೆಯ ಕಣ್ರೆಪ್ಪೆಗಳ 
 
ಹೂವ ಮಕರಂಧವನೆಲ್ಲ 
ಕೂಡಿಸಿ 
ಹಾಲ ನೊರೆಯಿಂದ ಮುಳುಗಿಸಿ 
ಹೆಣೆಯಿತೇ ಬೊಮ್ಮನ ಕೈಗಳು 
ಸವಿಯ ಚೆನ್ದುಟಿಯ 
 
ಹಾಲ ಕೊಳದಿ ಬೆಳೆದ 
ಕೆಂಪು ಕಮಲವ ಆಯ್ದು ತಂದು 
ಜೇನು ಗಂಧಗಳ ಬೆರೆಸಿ 
ಅರೆದು ಮಾಡಿದನೆ 
ಸೌಗಂಧದ ಚೆಲುವ ಮೈ ಸಿರಿಯ 
 
ಈ ಚೆಲುವೆ 
ಕೈ ಯಾಡುವೆಡೆ 
ಬಿರುಗಾಳಿ ತಂಗಾಳಿ ಯಾಗುವುದು 
ಇವಳು ನಡೆದಾಡು ವೆಡೆ 
ಮರುಭೂಮಿ ಹಸಿರು ಕಾನನವಾಗುವುದು 
 
ನಿನ್ನ ಸೌಂದರ್ಯಕೆ 
ಪದಗಳೇ ನಿಲುಕವು 
ಹಾಡಿ ಹೊಗಳಲೆಂದರೆ 
ನಿನ್ನ ನೋಡುತಲೇ 
ಎಲ್ಲ ಮರೆವವು 
 
ಹೇಳೆ ಚೆಲುವೆ 
ನಿನ್ನ ವರ್ಣಿಸೋ ರಸಿಕನಾರು? 
ನಿನ್ನ ಸೌಂದರ್ಯಕೆ 
ಸಿಲುಕುವ ಪದಗಳಾವು