ಎಳ್ಳು-ಬೆಲ್ಲದ ಹುಡುಗಿ

ಕಾದು ಕುಳಿತಿಹೆನು ಹುಡುಗಿ
ನೀ ಬಂದೆ ಬರುವಿಯೆಂದು
ಎಳ್ಳು-ಬೆಲ್ಲ ತರುವಿಯೆಂದು

ಹೋದ ಸಲ ಜಡೆಯೆಳೆದು
ಕೆಣಕಿದ್ದು ನೆನಪಿದೆಯ?
ನಿನ್ನ ಬಣ್ಣ ಬಣ್ಣದ
ಮಾತಿಗೆ ಮರುಳಾಗಿ
ಬೆಲ್ಲದಂತಹ ಮುತ್ತ ನೀಡಿದ್ದು
ಮರೆತಿರುವೆಯ ಹುಡುಗಿ?

ಎಳ್ಳು-ಬೆಲ್ಲದ ಸಂಕ್ರಾಂತಿಯಂದು
ಮನೆಗೆ ನೀ ನಲಿಯುತ ಬಂದು
‘ಆಂಟಿ’ ಎಂದು ಮೆಲ್ಲಗೆ ಕರೆಯಲು
ಮೂಲೆಯಲಿ ಅವಿತು ಕುಳಿತ ನಾನು
ಎದ್ದೋಡಿ ಬರುವೆ
ನಿನ್ನ ಕೂಡಿ ನಲಿವೆ

ನನ್ನ ಅಮ್ಮನಿಗೆ ನೀನೇನು
ಹೇಳುವ ಹಾಗಿಲ್ಲ
ಸೊಸೆಯಾಗುವವಳ ಗುಟ್ಟು ರಟ್ಟಾಗುವುದಲ್ಲ
ಅಮ್ಮನಿಗೆ ಒಳ್ಳೆಯ ಮಗನು ನಾನು
ನೀನೇಳಲು ಅವಳು ನಂಬೋದಿಲ್ಲ

ಕಾಯುತಿರುವೆನು ಹುಡುಗಿ
ಕಾಯಿಸದಿರು ನನ್ನ ಬೆಡಗಿ
ನಿನ್ನ ಬರುವಿಕೆಯ ಘಳಿಗೆ ಎಣಿಸುತಿಹೆನು
ನಿನ್ನಾಗಮನದಿನ್ದಲೆ ನಾನು ಬದುಕುವೆನು

No comments: